"ಮಳೆ ಬರುತ್ತಿದೆ" ಎಂದಾಗ, ಕಾಲೆಲ್ಲಿದೆ ನಿನಗೆ ಮಳೆಯಲ್ಲಿ ನಡೆಯಲು ಎಂದು ವ್ಯಂಗ್ಯವಾಡಿ ನಕ್ಕರಲ್ಲೇ ಗೆಳತಿ!
" ಮನುಜರಿವರೆ?" ಎಂದೆನಿಸಿದಾಗ, ಘೊಳ್ಳ್ ಎಂದು ನಕ್ಕು ಕಟಕಿಯಾಡಿ ನೋಯಿಸಿ ನಕ್ಕರಲ್ಲೇ ಗೆಳತಿ!
ಕಳೆದ ಕೊಂಡಿಯ ಜೋಡಿಸಿ ಬೆಸೆಯಲು ಹೊರಟಾಗ ಕೈತಟ್ಟಿ ನಕ್ಕು ಸಂಬಂಧವೇನು ಎಂದು ಹಂಗಿಸಿದರಲ್ಲೇ!
ಕಾಲನ ತುಳಿತಕ್ಕೆ ಹರಡಿ ಹೋದ ಬದುಕು ಕಟ್ಟಿಕೊಳ್ಳುತ್ತೇನೆಂದಾಗ "ಕಾಲಿಲ್ಲವೇ ನಿನಗೆ" ಎಂದು ನೆನಪಿಸಿ ಕಿಸಕ್ಕೆಂದರಲ್ಲೇ ಗೆಳತಿ!
ಬೇಸಗೆಯ ಮೊದಲ ಮಳೆಯ ತಂಪು ಸಿಂಚನಕ್ಕೊಂದು ಕ್ಷಣ ಮಾರು ಹೋದ ಮನ "ಮಳೆ ಬರುತ್ತಿದೆ" ಎಂದಾಗ ನಕ್ಕರ್ಯಾಕೆ ಇವರೆಲ್ಲ?
"ಮಳೆ ಬರುತ್ತಿದೆ" ಎಂದಾಗ ನಡೆಯಲು ಕಾಲಿಲ್ಲದೆಯೂ, ಮನ, ಕಪ್ಪು ಡಾಂಬರು ರಸ್ತೆಯುದ್ದಕ್ಕೂ ಹರಿದಾಡಿದ್ದೂ ಸುಳ್ಳೇನೇ ಗೆಳತಿ?
ನೆತ್ತಿ ಚರ್ಮ ಸುಡುವ ಬಿಸಿಲಿಗೆ ದಪ್ಪನೆಯ ಮಳೆಹನಿ
ಬೆವರ ಬಸಿಯುವ ಸೆಕೆಗೆ ತಂಪಾದ ಗಾಳಿ, ಮೈಮರೆಸಿತ್ತು, "ಮಳೆ ಬರುತ್ತಿದೆ" ಎಂಬ ಉದ್ಗಾರಕ್ಕೆ ವ್ಯಂಗ್ಯವೇಕೆ ಸಿಕ್ಕಿತು?
ಮತ್ತೊಂದು ನಗೆ, ಬಿಸಿಲು ಮಳೆಯ ಕಾಮನಬಿಲ್ಲು ಮೂಡಬಹುದಲ್ಲ ಜೀವನದಾಗಸದಲ್ಲಿ!
ಹಂಬಲಿಸಿ ಕಾದಾಗ ಬಿದ್ದೊಂದೆರಡು ಹನಿ, ಆಸೆಯ ಕೊನರಿಸಿ "ಮಳೆ ಬರುತ್ತಿದೆ" ಎಂದಾಗ ತುಟಿ ಸೊಟ್ಟ ಮಾಡಿ ನಗು ಮುಕ್ಕಳಿಸಿ ಚೆಲ್ಲಿದರೇಕೆ ಗೆಳತಿ?
ಯಾರಲ್ಲಿರುವೆಯೋ ಎಲ್ಲಿರುವೆಯೋ ಉತ್ತರದ ಬೆಳ್ಳಿ ರೇಖು ಹಿಡಿದು ಸಾಂತ್ವನದ ಮಂತ್ರ ದಂಡ ಝಳಪಿಸಿ ಅವರೆಲ್ಲ ನಕ್ಕಾಗ ಉದುರಿದ ಕಣ್ಣೀರ ಹನಿಯ ಪಸೆಯಿಲ್ಲದಂತಾರಿಸುವೆಯಾ ಗೆಳತಿ?
ಜಾಹ್ನವಿ. ಕೆ .ಜೆ
Comments
Post a Comment